ಕರನಿರಾಕರಣ ಚಳವಳಿ : ಪ್ರಭುತ್ವದ ರೀತಿನೀತಿಗಳು ಪ್ರಜೆಗಳಿಗೆ ಸರಿಯೆನಿಸದಾಗ, ಅವರ ಹಿತಗಳಿಗೆ ವಿರೋಧವಾಗಿ ಸರ್ಕಾರ ವರ್ತಿಸುತ್ತಿದ್ದಾಗ, ಪ್ರಜೆಗಳ ನ್ಯಾಯವಾದ ಆಶೋತ್ತರಗಳನ್ನು ಈಡೇರಿಸಲಿಕ್ಕೂ ಆಳರಸರು ಒಡಂಬಡದಿದ್ದಾಗ, ತಮ್ಮ ಹಕ್ಕಿನ ಸ್ಥಾಪನೆಗಾಗಿ, ಹಿತರಕ್ಷಣೆಗಾಗಿ, ನ್ಯಾಯದ ಪುರೈಕೆಗಾಗಿ ಅಥವಾ ಆಶೋತ್ತರಗಳ ಈಡೇರಿಕೆಗಾಗಿ ಪ್ರಜೆಗಳು ಕೈಕೊಳ್ಳುವ ತೀವ್ರವಾದ ಮತ್ತು ಸಾಮಾನ್ಯವಾಗಿ ಕೊಟ್ಟಕೊನೆಯ ಅಹಿಂಸಾಸ್ಮಕ ಅಸ್ತ್ರ; ಸರ್ಕಾರಕ್ಕೆ ಕೊಡಬೇಕಾದ ಕಂದಾಯವನ್ನು ಕೊಡಲು ನಿರಾಕರಿಸುವ ಸಾಮೂಹಿಕ ಕ್ರಮ. ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಸಮರ ಕಾಲದಲ್ಲಿ ರೂಪಿತವಾಗಿ ಪ್ರಯೋಗವಾದ ಒಂದು ಮುಖ್ಯ ಅಸ್ತ್ರ (ನೋ-ಟ್ಯಾಕ್ಸ್‌ ಕ್ಯಾಂಪೇನ್) ಎಂದಿನಿಂದಲೋ ಪ್ರಜೆ ಪ್ರಭುತ್ವಗಳ ಮಧ್ಯೆ ಒಂದು ಬಗೆಯ ಒಪ್ಪಂದವಾಗಿದೆ. ಜನರ ಪ್ರಾಣ, ಮಾನ, ಆಸ್ತಿ-ಪಾಸ್ತಿಗಳ ಸಂರಕ್ಷಣೆ ಮಾಡುವುದೂ ಶಾಂತಿ-ಸಮಾಧಾನಗಳನ್ನು ನೆಲೆಗೊಳಿಸುವುದೂ ನಿತ್ಯ ಜೀವನ ನೆಮ್ಮದಿಯಾಗಿರಲು ಅವಶ್ಯವಾದದ್ದನ್ನೆಲ್ಲ ಮಾಡುವುದೂ ಪ್ರಭುತ್ವದ ಹೊಣೆ. ಈ ಭರವಸೆಗೆ ಪ್ರತಿಯಾಗಿ, ಸರ್ಕಾರದ ಕರ್ತವ್ಯ ನಿರ್ವಹಣೆಗಾಗಿ, ಸಮಾಜದಲ್ಲಿ ಸಮಸ್ಥಿತಿ ಸ್ಥಾಪನೆಗಾಗಿ, ಪ್ರಜೆಗಳು ಪ್ರಭುತ್ವಕ್ಕೆ ನಿಗದಿಯಾದ ಶುಲ್ಕ ಅಥವಾ ತೆರಿಗೆಯನ್ನು ವಸ್ತುರೂಪದಲ್ಲೊ, ಹಣದ ರೂಪದಲ್ಲೋ ಸಲ್ಲಿಸಬೇಕಾಗುತ್ತದೆ. ಕೃಷಿಕೈಗಾರಿಕೆ, ವ್ಯಾಪಾರ ಮುಂತಾದ ನಾನಾ ವೃತ್ತಿಗಳಲ್ಲಿ ತೊಡಗಿರುವವರು ತಮ್ಮ ವೃತ್ತಿಸೌಕರ್ಯ ಮತ್ತು ಸಂರಕ್ಷಣೆಗೆ ಪ್ರತಿಯಾಗಿ ಪ್ರಭುತ್ವಕ್ಕೆ ತಾವು ಗಳಿಸಿದ್ದರಲ್ಲೊಂದು ಭಾಗವನ್ನು ಕೂಡುತ್ತಾರೆ. ರೈತ ಪ್ರಭುತ್ವಕ್ಕೆ ಪ್ರತಿವರ್ಷ ಕೊಡುವ ಕಂದಾಯವನ್ನು ಒಳಗೊಂಡು ಎಲ್ಲ ಬಗೆಯ ತೆರಿಗೆಗಳನ್ನೂ ಕರವೆನ್ನುವುದೂ ಉಂಟು.
ರಾಜ ಪ್ರಜಾಪ್ರಿಯನಾಗದೆ, ಪ್ರಜೆಯ ಹಿತಸಾಧಕನಾಗದೆ ಇದ್ದರೆ, ಪ್ರಜಾಹಿಂಸಕನಾದರೆ, ಪ್ರಜೆ ಪ್ರತಿಭಟಿಸಬಹುದು. ಇದು ಅವನ ಮೂಲಭೂತಹಕ್ಕು. ರಾಜ ದುಷ್ಟನಾದರೆ, ಪ್ರಜಾಪೀಡಕನಾದರೆ ಪ್ರಜೆಗಳು ಅವನನ್ನು ಹುಚ್ಚುನಾಯಿಯಂತೆ ಭಾವಿಸಿ, ಬೇಟೆಯಾಡಿ ಕೊಲ್ಲಬಹುದೆಂದು ಪ್ರತಿಪಾದಿಸುವವರೆಗೂ ಭಾರತದ ರಾಜಿನೀತಿಶಾಸ್ತ್ರಜ್ಞರು ಹೋಗಿದ್ದಾರೆ. ನ್ಯಾಯವಾದ ಕಾರಣಗಳಿಗಾಗಿ ರೈತರು ಕಂದಾಯ ಸಲ್ಲಿಸದೆ ನಿರಾಕರಿಸಲು ಸಹ ಅಧಿಕಾರ ಉಳ್ಳವರಾಗಿದ್ದಾರೆ. ಅಷ್ಟು ಮಾತ್ರವಲ್ಲ. ಪ್ರಜೆಗಳಿಗೂ ಪ್ರಭುತ್ವಕ್ಕೂ ಘರ್ಷಣೆ ಉಂಟಾದಾಗ ಪ್ರಜೆಗಳು ಪ್ರಭುತ್ವದ ರೀತಿನೀತಿಗಳನ್ನು ಪ್ರತಿಭಟಿಸಿದ್ದಾರೆ. ಸಾಮೂಹಿಕವಾಗಿ ಹಳ್ಳಿಹಳ್ಳಿಗಳನ್ನೇ ಬರಿದುಮಾಡಿ, ದೇಶ ಬಿಟ್ಟುಹೋದ ಉದಾಹರಣೆಗಳಿವೆ. ಅಂಥ ಸಂದರ್ಭಗಳಲ್ಲಿ ಪ್ರಭುತ್ವದವರು ಪ್ರಜೆಗಳನ್ನು ಬರಮಾಡಿಕೊಂಡು, ಮಾತುಕತೆ ನಡೆಸಿ, ಅವರಿಗಾದ ಅನ್ಯಾಯಗಳನ್ನು ಸರಿಪಡಿಸಿ, ಪರಸ್ಪರ ಬಾಂಧವ್ಯವನ್ನು ಸುರಸಗೊಳಿಸಿದ್ದಾರೆ.

ಸ್ವಾತಂತ್ರ್ಯಸಾಧನೆಗಾಗಿ ಭಾರತ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಹೋರಾಟ ನಡೆಸಿದ್ದ ಕಾಲದಲ್ಲಿ ಮಹಾತ್ಮಗಾಂಧೀಯವರು ಈ ಸಂಗ್ರಾಮದ ನಾಯಕತ್ವ ವಹಿಸಿಕೊಂಡ ಮೇಲೆ ಅವರು ಇದಕ್ಕೆ ಜಗದಾಶ್ಚರ್ಯಕರವಾದ ರೂಪ ಕೊಟ್ಟರು. ಶಸ್ತ್ರಾಸ್ತ್ರಗಳನ್ನು ನಿರಾಕರಿಸಿ, ಅಹಿಂಸೆಯ ಮಾರ್ಗವನ್ನು ಅನುಸರಿಸಿ, ಸತ್ಯವನ್ನಾಶ್ರಯಿಸಿ, ನಡೆಸಿದ ಮಹಾಸಂಗ್ರಾಮವದು. ಒಂದು ಜನಾಂಗ ಶಾಂತಿಯಿಂದ, ತ್ಯಾಗದಿಂದ, ಪ್ರೇಮದಿಂದ ಪರಶತ್ರುವನ್ನು ಗೆಲ್ಲಬಹು ದೆಂಬುದನ್ನು ಮಾನವಕುಲದ ಅನುಭವಕ್ಕೆ ಗಾಂಧಿಯವರು ತಂದುಕೊಟ್ಟರು. ಸತ್ಯ, ತ್ಯಾಗ, ಅಹಿಂಸೆಗಳೆಂಬ ತ್ರಿಮುಖ ಅಸ್ತ್ರಕ್ಕೆ ಅವರು ಸತ್ಯಾಗ್ರಹವೆಂದು ಹೆಸರಿಟ್ಟರು. ಈ ಅಸ್ತ್ರಪ್ರಯೋಗಾರ್ಹತೆ ಪಡೆಯುವುದೂ ಗಾಂಧಿಯವರಿಂದ ಪ್ರಶಸ್ತಿ ಪಡೆಯುವುದೂ ಸಾಮಾನ್ಯವಾಗಿರಲಿಲ್ಲ. ಇಂಥ ಅಸ್ತ್ರಪ್ರಯೋಗ ಮಾಡುವುದರಲ್ಲಿ ಗಾಂಧಿಯವರು ಅನೇಕ ಭಾರತೀಯರನ್ನು ನಿಪುಣರನ್ನಾಗಿ ಮಾಡಿದರು. ಅವರಿಗೊಂದು ನವೀನ ಸಂಸ್ಕಾರವನ್ನೇ ಗಳಿಸಿಕೊಟ್ಟರು. ದುಷ್ಕರ್ಮದಲ್ಲಿ ತೊಡಗುವ ಸರ್ಕಾರದೊಂದಿಗೆ, ತಮಗೆ ಬೇಡವೆನಿಸಿದ ಸರ್ಕಾರದೊಂದಿಗೆ, ಅಸಹಕರಮಾಡುವುದು ಪ್ರತಿಯೊಬ್ಬ ಪ್ರಜೆಯ ಈಶ್ವರದತ್ತವಾದ ಹಕ್ಕೆಂದರು. ದುಷ್ಕರ್ಮದೊಂದಿಗೆ ಸಹಕಾರ ಮಾಡಬಾರದೆಂಬ ತತ್ತ್ವದ ಪ್ರತಿಪಾದನೆ ಮಾಡಿದರು.

ಗಾಂಧೀಜಿಯವರ ಸತ್ಯಾಗ್ರಹಪ್ರಯೋಗಾವಸರದಲ್ಲಿ ನಾನಾಘಟ್ಟಗಳುಂಟು. ಕಟ್ಟಕಡೆಯ ಘಟ್ಟ ಕರನಿರಾಕರಣ. ಗಾಂಧೀಜಿಯವರು ನಡೆಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಅವರ ಒಪ್ಪಿಗೆ ಪಡೆದು, ಒಂದೆರಡು ಪ್ರಾಂತ್ಯಗಳಲ್ಲಿ ಮಾತ್ರ ಸತ್ಯಾಗ್ರಹಿಗಳು ಕರನಿರಾಕರಣ ವನ್ನಾರಂಭಿಸಿದರು. ಗುಜರಾತಿನಲ್ಲೂ ಕರ್ನಾಟಕ ಪ್ರಾಂತ್ಯದ ಕೆಲವು ತಾಲ್ಲೂಕುಗಳಲ್ಲೂ ಮಾತ್ರವೇ ತೃಪ್ತಿಕರವಾಗಿ ಈ ಆಂದೋಲನ ಸಾಗಿತು. ಗುಜರಾತಿನ ಬಾರ್ದೋಲಿಯ ರೈತರು ಕರನಿರಾಕರಣ ಕ್ರಮವನ್ನಾರಂಭಿಸುವ ನಿರ್ಣಯ ಮಾಡಿದರು. ಈ ಸನ್ನಿವೇಶ ಕುರಿತು ಗಾಂಧೀಜಿಯವರೇ 1922 ಜನವರಿ 1ರ ಯಂಗ್ ಇಂಡಿಯ ಪತ್ರಿಕೆಯಲ್ಲಿ ಈ ರೀತಿ ಬರೆದರು: ಸು. 4,000 ಖಾದಿಧಾರಿಗಳು ಸಭೆಸೇರಿದ್ದರು. ಅವರಲ್ಲಿ 500 ಮಂದಿ ಹೆಂಗಸರು. ನಾನು ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಹಾಕಿ ಕರನಿರಾಕರಣಮಾಡಲು ಸಿದ್ಧರಾಗಿರುವವರು ಇಂತಿಂಥ ಯೋಗ್ಯತಾಸಿದ್ಧಿ ಪಡೆದಿರಬೇಕೆಂದು ವಿವರಿಸಿ ಹೇಳಿದೆ. ಪ್ರತಿಯೊಬ್ಬರೂ ಅರ್ಥಮಾಡಿಕೊಂಡರು. ಅವರು ಎಲ್ಲ ಕಷ್ಟಗಳನ್ನೂ ಎದುರಿಸಲು ಸಿದ್ಧರಾಗಿದ್ದರು; ಸೆರೆಮನೆವಾಸ ಮಾತ್ರವಲ್ಲ, ಪ್ರಾಣ ಕೊಡಲಿಕ್ಕೂ ಸಿದ್ಧರಾಗಿದ್ದರು. ಗಾಂಧೀಯವರು ಅವರ ಬಗ್ಗೆ ಇಷ್ಟು ಹೇಳಿದಮೇಲೂ ಅವರಿಗೆ ಕರನಿರಾಕರಣ ವನ್ನಾರಂಭಿಸಲು ಒಪ್ಪಿಗೆ ಕೊಡಲಿಲ್ಲ.

1928ರಲ್ಲಿ ಸರ್ದಾರ್ ಪಟೇಲರ ನಾಯಕತ್ವದಲ್ಲಿ ಬಾರ್ದೋಲಿ ತಾಲ್ಲೂಕಿನಲ್ಲಿ ಕರನಿರಾಕರಣ ಸತ್ಯಾಗ್ರಹ ಸಿದ್ಧತೆಗಳಾದವು. ಹಲವು ವರ್ಷಗಳಿಂದ ಈ ತಾಲ್ಲೂಕಿನಲ್ಲಿ ನಾಲ್ಕೈದು ಸೇವಾಸಂಸ್ಥೆಗಳಿದ್ದವು. ಅವುಗಳನ್ನಾಧಾರಮಾಡಿ ಶಿಬಿರಗಳನ್ನೇರ್ಪಡಿಸಲಾಯಿತು. ಒಂದೊಂದು ಶಿಬಿರದಲ್ಲೂ ಇನ್ನೂರುಮಂದಿ ಸ್ವಯಂಸೇವಕರು. ಇವರೆಲ್ಲರಿಗೂ ನಿರ್ಣೀತ ಕರ್ತವ್ಯಭಾರವಿತ್ತು. ಪ್ರತಿಯೊಂದು ಶಿಬಿರವೂ ಶಸ್ತ್ರಸನ್ನದ್ಧರಣಾಂಗಣದಂತಿತ್ತು. ಸುದ್ದಿಯ ಕರಪತ್ರಗಳ ಪ್ರಕಟಣೆಯಾಗುತ್ತಿತ್ತು. ಎಂಥ ಪರಿಸ್ಥಿತಿಯೇ ಉಂಟಾಗಲಿ ಅದನ್ನೆದುರಿಸಲು ರೈತರು ದೃಢಸಂಕಲ್ಪರಾಗಿದ್ದರು.

ನಾವು ಪುರ್ಣ ಅಹಿಂಸಾವಾದಿಗಳಾಗಿರುತ್ತೇವೆ. ಎಂಥ ಕಷ್ಟವೇ ಬರಲಿ-ನಾವು ಸಹಿಸುತ್ತೇವೆ. ಎದುರಿಸುತ್ತೇವೆ. ನಮ್ಮದೆನ್ನುವುದೆಲ್ಲ ನಾಶವಾಗಿಹೋದರೂ ನಾವು ದುಃಖಪಡುವುದಿಲ್ಲ. ಸಂತೋಷದಿಂದ ಎಲ್ಲವನ್ನೂ ಎದುರಿಸುತ್ತೇವೆ-ಎಂಬುದಾಗಿ ಪ್ರಮಾಣವಚನ ತೆಗೆದುಕೊಂಡರು.

1928 ಫೆಬ್ರುವರಿ 12ರಂದು ಪ್ರಜಾಪ್ರಮುಖರೆಲ್ಲ ಬಾರ್ದೋಲಿಯಲ್ಲಿ ಸಮ್ಮೇಳನ ನಡೆಸಿದರು. ಅಂಗೀಕೃತವಾದ ನಿರ್ಣಯ ಈ ರೀತಿ ಇದೆ: ಕಂದಾಯನಿರ್ಣಯದ ಪುನಃಪರಿಶೀಲನೆ ನಿರಂಕುಶವಾದುದು, ಅನ್ಯಾಯವಾದುದು ಮತ್ತು ಗೋಳುಗುಟ್ಟಿಸುವಂಥದು. ಆದಕಾರಣ ಎಲ್ಲ ಹಿಡುವಳಿದಾರರೂ ಪುನಃಪರಿಶೀಲನೆಯಿಂದ ನಿಶ್ಚಯವಾಗಿರುವ ಕಂದಾಯವನ್ನು ಕೊಡದೆ ನಿರಾಕರಿಸತಕ್ಕದ್ದು, ಪುರ್ಣ ಹಣ ಸಂದಾಯವಾಯಿತೆಂದು ಹೇಳಿ ಸರ್ಕಾರ ಹಳೆ ಕಂದಾಯದ ಮೊತ್ತವನ್ನಂಗೀಕರಿಸಲು ಒಪ್ಪಬೇಕು. ಇಲ್ಲವೆ ಸರ್ಕಾರದವರು ನಿಷ್ಪಕ್ಷಪಾತ ವಿಚಾರಣಾ ಸಮಿತಿಯನ್ನು ನೇಮಿಸಿ, ಆ ಸಮಿತಿ ಸ್ಥಳಪರೀಕ್ಷೆ ಮಾಡಿ ವಿಚಾರಣೆ ನಡೆಸಿ ಒಂದು ತೀರ್ಮಾನಕ್ಕೆ ಬರುವವರೆಗೂ ಹಳೆಕಂದಾಯದ ಮೊತ್ತವನ್ನಂಗೀಕರಿಸಲು ಒಪ್ಪಬೇಕು.

ಈ ನಿರ್ಣಯವಾಗುತ್ತಲೇ ರೈತರ ಸತ್ಯಾಗ್ರಹಸಿದ್ಥತೆಯೊಂದು ಕಡೆ, ಪ್ರಭುತ್ವೋದ್ಯೋಗಿಗಳ ಸಮರಸಿದ್ಧತೆಯೊಂದು ಕಡೆ ಆರಂಭವಾದುವು. ಇವೆರಡು ಚಟುವಟಿಕೆಗಳೂ ವಾತಾವರಣವನ್ನು ಕಲಕಿದುವು. ಗಂಡಸರು, ಹೆಂಗಸರು, ಮುದುಕರು, ಮಕ್ಕಳು, ಅವರಿವರೆನ್ನದೆ ಎಲ್ಲರೂ ಎಂಥ ತಾಗ್ಯಕ್ಕಾದರೂ ಬಲಿದಾನಕ್ಕಾದರೂ ಸಿದ್ಧರಾದರು. ಸರ್ದಾರರು ಎಲ್ಲೆಲ್ಲೂ ಜನರನ್ನು ಸೇರಿಸಿ, ಸತ್ಯಾಗ್ರಹದ ಕಠೋರ ಪರಿಣಾಮಗಳನ್ನು ವರ್ಣಿಸುತ್ತ ಬಂದರು. ಜನರಲ್ಲಿ ಮಾತಿಗೆ ನಿಲುಕದಷ್ಟು ಉತ್ಸಾಹ ಶ್ರದ್ಧೆಗಳಿದ್ದವು.

ಸರ್ಕಾರದ ಅಧಿಕಾರಿಗಳು ಶಾಸನ, ಶಸ್ತ್ರ ಇವೆರಡನ್ನು ಆಶ್ರಯಿಸಿ ಕಂದಾಯ ವಸೂಲಿಗಾರಂಭಿಸಿದರು. ಹಲವು ದುರ್ಬಲಹೃದಯಿ ರೈತರನ್ನೇ ಬಳಸಿಕೊಂಡು ಸತ್ಯಾಗ್ರಹ ಚಳವಳಿಯನ್ನು ನಿರ್ಮೂಲಮಾಡಲು ಯತ್ನಿಸಿದರು. ಸರ್ಕಾರಿ ಅಧಿಕಾರಿಗಳು ಹಿಡಿಯದ ಮಾರ್ಗವಿಲ್ಲ. ರೈತರನ್ನು ಹೆದರಿಸಿದರು. ಅವರಿಗೆ ಜುಲ್ಮಾನೆ ಹಾಕಿದರು. ಅವರನ್ನು ಹಿಡಿದು ಸೆರೆಮನೆಗೆ ದೂಡಿದರು. ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲುಹಾಕಿಕೊಂಡರು. ರೈತರು ಜಗ್ಗಲಿಲ್ಲ. ಲಂಚ ಕೊಟ್ಟು ಹಲವರನ್ನು ಬಲೆಗೆ ಸೆಳೆದುಕೊಳ್ಳಲು ನೋಡಿದರು. ಪ್ರಯೋಜನವಾಗಲಿಲ್ಲ. ಒಂದು ಪಂಗಡವನ್ನು ಇನ್ನೊಂದು ಪಂಗಡದ ಮೇಲೆ ಎತ್ತಿಕಟ್ಟುವ ಹಂಚಿಕೆ ಹಾಕಿದರು. ಅದೂ ಯಶಸ್ವಿಯಾಗಲಿಲ್ಲ. ಲಾಠಿಪ್ರಯೋಗ ಆರಂಭವಾಯಿತು. ರೈತರು ಜಗ್ಗಲಿಲ್ಲ, ಎದೆ ಕೊಟ್ಟು ನಿಂತು ಏಟು ತಿಂದರು. ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಹೊರಗಿನಿಂದ ಪಠಾಣರನ್ನು ಆಮದುಮಾಡಿ, ಅವರನ್ನು ರೈತರಮೇಲೆ ಬಿಟ್ಟಾಗಲೂ ಜನ ಹೆದರಲಿಲ್ಲ. ಜಮೀನುಗಳನ್ನು ಹರಾಜಿಗಿಟ್ಟರೆ ಕೊಳ್ಳುವವರೇ ಇರಲಿಲ್ಲ. ಅಧಿಕಾರಿಗಳು 1,400 ಎಕರೆಗಳ ಜಮೀನನ್ನು ವಶಪಡಿಸಿಕೊಂಡರು. ಹೋದಷ್ಟು ಬೆಲೆಗೆ ಹರಾಜುಹಾಕಿದರು.

ರೈತರು ಮಾತ್ರ ಶಾಂತಿಯಿಂದಲೇ ನಡೆದುಕೊಂಡರು. ಸರ್ಕಾರದ ಮೇಲಿನ ಅಧಿಕಾರಿಗಳು, ಕೆಳಗಿನ ನೌಕರರು, ಹರಾಜು ಜಫ್ತಿಗಳೇ ಮುಂತಾದ ಕ್ರಮಗಳಿಗೆ ಸಹಾಯಕರಾದ ಜನರು-ಇವರ ಮೇಲೆಲ್ಲ ಜನರು ಸಾಮಾಜಿಕ ಬಹಿಷ್ಕಾರ ಹಾಕಿದರು, ಪರಮಾಶ್ಚರ್ಯಕರವಾದ ಈ ಕರನಿರಾಕರಣ ಸಂಗ್ರಾಮದಿಂದ ಬಾರ್ದೋಲಿಗೆ ಅಖಿಲಭಾರತ ಕೀರ್ತಿಗೌರವಗಳು ಬಂದವು. ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಸಹ ಬಾರ್ದೋಲಿ ಕರನಿರಾಕರಣದ ವಿಚಾರ ಬಂತು. ಈ ಸಂಗ್ರಾಮ ಐದಾರು ತಿಂಗಳ ಕಾಲ ನಡೆಯಿತು.

ಕಡೆಗೆ ಸರ್ಕಾರ ಶರಣಾಗಬೇಕಾಯಿತು. ಗವರ್ನರ್ ವಿಚಾರಣಾ ಸಮಿತಿಯೊಂದನ್ನು ನೇಮಿಸಿದ. ವಶಪಡಿಸಿಕೊಂಡ ಜಮೀನುಗಳನ್ನೆಲ್ಲ ಸಂಬಂಧಪಟ್ಟವರಿಗೆ ಹಿಂದಕ್ಕೆ ಕೊಡಲಾಯಿತು. ವಜಾ ಮಾಡಲಾಗಿದ್ದ ಗ್ರಾಮೋದ್ಯೋಗಿಗಳನ್ನೆಲ್ಲ ಕರೆಸಿ ಅವರ ದಫ್ತರಗಳನ್ನು ಅವರಿಗೆ ಕೊಟ್ಟು, ಕೆಲಸಗಳಿಗೆ ನೇಮಿಸಿದರು. ಸಮಿತಿಯೂ ವಿಚಾರಣೆ ನಡೆಸಿತು. ರೈತರವಾದ ಯೋಗ್ಯವೆಂದು ಅಂಗೀಕರಿಸಿತು. ಶೇ. 22 ರಷ್ಟು ಏರಿಸಿದ್ದ ಕಂದಾಯವನ್ನು ಶೇ. 6 1/4ಗೆ ಇಳಿಸಲಾಯಿತು. ತಮ್ಮ ಶಿಫಾರಸುಗಳನ್ನು ಸಮಿತಿಯ ಸದಸ್ಯರು ಸರ್ಕಾರಕ್ಕೆ ಕಳುಹಿಸಿದರು.
ಬಾರ್ದೋಲಿಯನ್ನು ಸತ್ಯಾಗ್ರಹದ ಪರಮಲಕ್ಷಣದ ಉದಾಹರಣೆಯನ್ನಾಗಿ ಮಾಡಬೇಕೆಂಬುದು ನಿಮ್ಮ ಕನಸಾಗಿತ್ತು. ಬಾರ್ದೋಲಿಯ ರೈತರು ತಮಗೆ ವಿಶಿಷ್ಟವೆನಿಸಿದ ರೀತಿಯಿಂದ ನಿಮ್ಮ ಕನಸನ್ನು ನಿಜಮಾಡಿದರು ಎಂಬುದಾಗಿ ಸರೋಜಿನಿದೇವಿಯವರು ಗಾಂಧೀಜಿಗೆ ಪತ್ರ ಬರೆದರು.
ಬಾರ್ದೋಲಿಯ ಕರನಿರಾಕರಣ ಚಳವಳಿಯಲ್ಲದೆ ಎಲ್ಲರ ಗಮನ ಸೆಳೆಯುವ ಇನ್ನೊಂದು ಉದಾಹರಣೆಯೆಂದರೆ ಕರ್ನಾಟಕದ ಶಿರಸಿ, ಸಿದ್ದಾಪುರ, ಅಂಕೋಲೆ ಮತ್ತು ಹಿರೇಕೆರೂರು ತಾಲ್ಲೂಕುಗಳದು. ಈ ನಾಲ್ಕೂ ತಾಲ್ಲೂಕುಗಳ ಜನ ಗಾಂಧೀಜಿಯವರ ನಿರ್ಮಲ ಕಲ್ಪನೆ ಮತ್ತು ಪವಿತ್ರಭಾವನೆಗೆ ಲೇಶವೂ ಊನ ಬಾರದಂತೆ ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಹುಲ್ಲುಬನ್ನಿ ಕರನಿರಾಕರಣ ಮುಂತಾದವುಗಳನ್ನು ನಡೆಸಿದರು. ಅಂಕೋಲೆಯದು ಒಂದು ಧ್ಯೇಯಕ್ಕಾಗಿ ನಡೆದ (1930 ಏಪ್ರಿಲ್) ಸತ್ಯಾಗ್ರಹವೆನ್ನ ಬಹುದಾದರೂ ಉಳಿದ ತಾಲ್ಲೂಕುಗಳಲ್ಲಿ ನಡೆದದ್ದು ಒಂದು ಅನಿವಾರ್ಯ ಸನ್ನಿವೇಶದಿಂದಲೂ ಪ್ರಭಾವಿತವಾದದ್ದು ಎಂಬುದನ್ನು ಮರೆಯುವಂತಿಲ್ಲ.
1931ರಲ್ಲಿ ಶಿರಸಿ-ಸಿದ್ದಾಪುರ, ಹಿರೇಕೆರೂರು ಈ ಮೂರು ತಾಲ್ಲೂಕುಗಳಲ್ಲೂ ಕ್ಷಾಮ ಆವರಿಸಿತು. ದವಸ ಧಾನ್ಯಗಳ ಧಾರಣೆಗಳು ಬಿದ್ದುವು. ಶಿರಸಿ, ಸಿದ್ದಾಪುರಗಳ ಸುವರ್ಣಾದಾಯದ ಬೆಳೆಯೆಂದರೆ ಅಡಿಕೆ. ಏನೋ ಕಾರಣದಿಂದ ಆ ಬೆಳೆ ಹಾಳಾಯಿತು. ರೂಪಾಯಿಗೆ ನಾಲ್ಕಾಣೆ (ಕಾಲುಭಾಗ) ಬೆಳೆ ಕೂಡ ರೈತರ ಕೈ ಹತ್ತಲಿಲ್ಲ. ಆ ವರ್ಷ ಕಂದಾಯ ವಸೂಲು ಮಾಡಬಾರದೆಂದು ರೈತರು ಸರ್ಕಾರದಲ್ಲಿ ಮೊರೆ ಇಟ್ಟರು. ಅದು ಬರಿಯ ಅರಣ್ಯರೋದನವಾಯಿತು. ಸರ್ಕಾರ ಆ ಮೊರೆಗೆ ಕಿವಿಗೊಡಲಿಲ್ಲ. ಕ್ಷಾಮ ಸಂಭವಿಸಿಲ್ಲವೆಂದೂ ಬೆಳೆಯಾಗಿಲ್ಲವೆಂಬ ಮಾತು ಸುಳ್ಳೆಂದೂ ಇದು ಕರನಿರಾಕರಣ ಚಳವಳಿಯೆಂದೂ ಸರ್ಕಾರ ವಾದಿಸಿತು. ಆದರೆ ಕ್ಷಾಮ ಪ್ರಾಪ್ತಿಯಾಗಿದ್ದುದು ನಿಜ. ರೈತರೂ ಕಂಗಾಲಾಗಿದ್ದುದೂ ನಿಜ. ಚಳವಳಿಯ ನಾಯಕತ್ವವನ್ನು ರಾಜಕಾರಣಿಗಳು (ಹಾಗೆಂದು ಸರ್ಕಾರದವರು ಅವರನ್ನು ಕರೆದರು) ವಹಿಸಿದ್ದರೆಂಬುದೂ ನಿಜ. ಆದರೆ ಕ್ಷಾಮವೇ ಚಳವಳಿಗೆ ಮೂಲ ಕಾರಣವೆಂಬ, ಚಳವಳಿಯ ನಾಯಕರು ರಾಜಕಾರಣಿಗಳೇ ಆದರೂ ರೈತರ ನ್ಯಾಯವಾದ ಬೇಡಿಕೆಯನ್ನು ಈಡೇರಿಸಬೇಕೆಂಬ ವಾದಕ್ಕೆ ಸರ್ಕಾರ ವಿಮುಖವಾಗಿತ್ತು.

ಮೂರೂ ತಾಲ್ಲೂಕುಗಳ ರೈತರೂ ಶಾಸನಬದ್ಧವಾಗಿ, ಶಾಂತಿರೀತಿಯಿಂದ ನಡೆದುಕೊಂಡರು. ಇದು ಸಂಪುರ್ಣವಾಗಿ ಆರ್ಥಿಕ ದುಃಸ್ಥಿತಿಯ ಹೋರಾಟ, ರಾಜಕೀಯ ಹೋರಾಟವಲ್ಲ-ಎಂಬುದನ್ನು ಸ್ಥಾಪಿಸಿದರು. ಅರ್ಜಿಗಳನ್ನು ಹಾಕಿದರು. ಸಭೆಗಳನ್ನು ನಡೆಸಿದರು, ನಿರ್ಣಯಗಳನ್ನು ಮಾಡಿದರು; ಜಿಲ್ಲೆಯ ಅಧಿಕಾರಿಗಳನ್ನು ಕಂಡರು; ತಮ್ಮ ಕಷ್ಟಗಳನ್ನು ವಿವರಿಸಿದರು; ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಬೇರೆ ದಾರಿಕಾಣದೆ ರೈತರು ಸಾಂಗವಾಗಿ ಕರನಿರಾಕರಣ ಸತ್ಯಾಗ್ರಹವನ್ನಾರಂಭಿಸಿದರು. ಸರ್ಕಾರ ದಂಡದಾರಿಯಾಯಿತು. ರೈತರ ಬೆನ್ನೂಮೂಳೆಗಳನ್ನು ಮುರಿಯಲಾರಂಭಿಸಿತು.

ಶಿರಸಿ-ಸಿದ್ದಾಪುರಗಳ ರೈತರ ವ್ಯವಹಾರ 1923ರಿಂದ ಹಿರಿಯ ರೆವಿನ್ಯೂ ಆಧಿಕಾರಿ ಕಾಲ್ವೆನನ ಪರಿಶೀಲನೆಯಲ್ಲಿತ್ತು. ಇವೆರಡೂ ತಾಲ್ಲೂಕುಗಳಲ್ಲೂ ಈತ ಸಂಚಾರಮಾಡಿ, ಆರ್ಥಿಕ ಪರಿಶೀಲನೆ ನಡೆಸಿದ. ಕಂದಾಯದ ಮೊತ್ತವನ್ನು ಶಾಶ್ವತವಾಗಿ ಕಡಿಮೆಮಾಡಬೇಕೆಂದು ಸರ್ಕಾರಕ್ಕೆ ಸಲಹೆಮಾಡಿದ. ಆದರೆ ಸರ್ಕಾರ ಈ ಸಲಹೆಗಳನ್ನು ಪುರಸ್ಕರಿಸಲಿಲ್ಲ.

ಮೂರು ತಾಲ್ಲೂಕುಗಳ ರೈತರೂ ದೃಢಸಂಕಲ್ಪರಾದರು. ಕಂದಾಯವನ್ನು ಕೊಡುವುದಿಲ್ಲವೆಂದು ಹೇಳಿದರು. ಅಧಿಕಾರಿಗಳು ಜಮೀನುಗಳನ್ನು ಜಫ್ತಿಮಾಡಿದರು; ರೈತರಿಗೆ ಕೊಡಬಾರದ ಹಿಂಸೆ ಕೊಟ್ಟರು. ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡರೂ ಯಾವ ರೈತರೂ ಪ್ರತಿಭಟಿಸಲಿಲ್ಲ. ಜಮೀನು ಹರಾಜಿನಲ್ಲಿ ಸವಾಲು ಕೂಗುವವರೇ ಇರಲಿಲ್ಲ. ಎಂಟುನೂರಕ್ಕೂ ಮೀರಿ ಜಫ್ತಿಗಳಾದವು. ಇನ್ನೂರು ಮಂದಿಗೆ ಮುಟ್ಟುಗೋಲು ನೋಟೀಸ್ ಕೊಡಲಾಯಿತು. ಉಭಯ ಪಕ್ಷಗಳ ಮಧ್ಯೆ ಹೀಗೆ ಹೋರಾಟವಾಗುತ್ತಿದ್ದಾಗ, 1931ರ ಮಾರ್ಚ್ 4 ರಂದು, ಗಾಂಧೀ-ಇರ್ವಿನ್ ಒಡಂಬಡಿಕೆ ಯಾಯಿತು. ಚಳವಳಿ ನಿಂತಿತು.

ಜಮೀನುಗಳು ಹರಾಜಾಗುತ್ತಿದ್ದ ಕಾಲದಲ್ಲಿ ಸ್ವಯಂಸೇವಕರನೇಕರು ಪಿಕೆಟ್ ಮಾಡುತ್ತಿದ್ದರು. ಸರ್ಕಾರದವರು ಇವರ ಮೇಲೆಲ್ಲ ನಾನಾ ಆಪಾದನೆಗಳನ್ನು ಹೊರಿಸಿ ಮೊಕದ್ದಮೆಗಳನ್ನು ಹೂಡಿ, ವಿಚರಣೆಗೊಳಪಡಿಸಿ, ಇವರಿಗೆಲ್ಲ ಶಿಕ್ಷೆ ಕೊಡಿಸಿದ್ದರು. ಸ್ವಯಂಸೇವಕರನೇಕರಿಗೆ ಈ ತಾಲ್ಲೂಕು ಬಿಟ್ಟು ಹೊರಡಬೇಕೆಂದು ತಿಳಿವಳಿಕೆ ಕೊಟ್ಟಿದ್ದರು. ಧಾರವಾಡ, ಬೆಳಗಾಂವಿ ಕಡೆಗಳಲ್ಲಿ ಮನೆಗಳ ಶೋಧನೆ ನಡೆಸಿ ಪಿತೂರಿ ಮತ್ತು ರಾಜದ್ರೋಹ ಆಪಾದನೆಗಳಿಗಾಗಿ ಹಲವರ ಮೇಲೆ ಮೊಕದ್ದಮೆಗಳನ್ನು ಹೂಡುವ ಸಿದ್ಧತೆ ನಡೆದಿತ್ತು. ಆದರೆ ಒಡಂಬಡಿಕೆಯಿಂದಾಗಿ ಅದನ್ನೆಲ್ಲ ಕೈಬಿಡಬೇಕಾಯಿತು.

ಕಟ್ಟಕಡೆಗೆ ರೈತರ ಮೊರೆ ಸಾಧುವಾದದ್ದು ಎಂಬುದು ಸರ್ಕಾರದವರ ಮನಸ್ಸಿಗೆ ಬಂತು. ನಿಜವಾಗಿಯೂ ಇದು ಆರ್ಥಿಕ ದುಃಸ್ಥಿತಿಯ ಚಳವಳಿ ಎಂಬುದನ್ನು ಅಧಿಕಾರಿಗಳು ಗ್ರಹಿಸಿದರು. ಈ ಅಂಶವನ್ನು ಗಾಂಧೀಜಿಯವರು ಲಾರ್ಡ್ ಇರ್ವಿನ್ನನ ಗಮನಕ್ಕೆ ತಂದು ಅವನನ್ನೊಪ್ಪಿಸಿದರು. 1931 ಮೇ ತಿಂಗಳಿನಲ್ಲಿ ರೆವಿನ್ಯೂ ಕಮೀಷನರೊಂದಿಗೆ ಆದ ಒಡಂಬಡಿಕೆಯ ಫಲವಾಗಿ ಹಿರೇಕೆರೂರು ತಾಲ್ಲೂಕಿನ ರೈತರಿಗೆ ತೃಪ್ತಿಕರ ಪರಿಹಾರ ಸಿಕ್ಕಿತು. ಆ ವರ್ಷದ ಕಂದಾಯವನ್ನು ರದ್ದು ಮಾಡಿದರು.

ಆದರೆ ಶಿರಸಿ ಸಿದ್ದಾಪುರಗಳ ರೈತರ ವಿಚಾರದಲ್ಲಿ ಹೀಗಾಗಲಿಲ್ಲ. ರೈತರೊಬ್ಬೊಬ್ಬರೂ ಅರ್ಜಿಹಾಕಿಕೊಂಡರೆ ವಿಚಾರಮಾಡಿ ಸಂದರ್ಭಾನುಸಾರ ಕಂದಾಯಪರಿಹಾರ ಕೊಡುವುದಾಗಿ ಸರ್ಕಾರಿ ಅಧಿಕಾರಿಗಳು ಕೊಸರಾಟ ಮಾಡಿದರಲ್ಲದೆ ರೈತರಿಗೆ ಕಿರುಕುಳ ಕೊಟ್ಟರು. ಸ್ಥಳೀಯ ಅಧಿಕಾರಿಗಳು ಸರ್ಕಾರದ ಆಜ್ಞೆಗಳಿಗೆ ತಮ್ಮದೇ ಆದ ಭಾಷ್ಯ ಮಾಡಿದ್ದರಿಂದ ಬಡರೈತರಿಗೆ ಸಹಿಸಲಾಗದಷ್ಟು ಹಿಂಸೆ ಉಂಟಾಯಿತು. ಕಡೆಗೆ ಇಲ್ಲೂ ರೈತರಿಗೆ ಗೆಲವು ಸಾಧಿಸಿತು. ಬಂಧನದಲ್ಲಿದ್ದವರೆಲ್ಲರ ಬಿಡುಗಡೆಯಾಯಿತು. ನ್ಯಾಯ ಸ್ಥಾನಗಳಲ್ಲಿ ಹೂಡಿದ್ದ ಮೊಕದ್ದಮೆಗಳನ್ನೆಲ್ಲ ಅಧಿಕಾರಿಗಳು ಹಿಂದಕ್ಕೆ ತೆಗೆದುಕೊಂಡರು. ಕಡೆಗೂ ಕರನಿರಾಕರಣ ಸತ್ಯಾಗ್ರಹ ರೈತರಿಗೆ ಜಯದಲ್ಲಿ ಮುಕ್ತಾಯವಾಯಿತು.
1931-32ರ ಕರನಿರಾಕರಣ ಸತ್ಯಾಗ್ರಹದ ಮಾತುಬಂದಾಗ, ಕಾರವಾರ ಜಿಲ್ಲೆಯ ರೈತರ ಸತ್ತ್ವ ಮತ್ತು ಕ್ಷಾತ್ರಗುಣಗಳನ್ನು ಗಣನೆಗೆ ತೆಗೆದುಕೊಂಡಾಗ ಯಾರಿಗಾದರೂ ಹೆಮ್ಮೆಯಾಗುತ್ತದೆ. ಆ ಅಪುರ್ವ ಸಂಗ್ರಾಮದಲ್ಲಿ ಗಂಡಸರೂ ಹೆಂಗಸರೂ ಸಾಮಾನ್ಯ ಕಲ್ಪನೆಗೆ ಮೀರಿದ ತ್ಯಾಗ ತೋರಿಸಿದರು. ಬೀಳಗಿಯ ಶ್ರೀ ಕೃಷ್ಣ ಬಾಲಕೃಷ್ಣ ಪುರಾಣಿಕರು ಕರನಿರಾಕರಿಸಿದ ಕಾರಣ ಬಂಧನಕ್ಕೊಳಗಾದರು. ಅವರನ್ನು ಜನ ಮೆರವಣಿಗೆ ಮಾಡಿ ಪೊಲೀಸ್ ಠಾಣ್ಯಕ್ಕೆ ಕರೆದೊಯ್ದರು. ಪುರಾಣಿಕರು ಆಗ ತಮ್ಮ ಹೆಂಡತಿಯವರಿಗೆ ಹೇಳಿದ ಮಾತಿದು: ನಮ್ಮ ಹೊಲ, ಮನೆ ಆಸ್ತಿಗಳೆಲ್ಲವನ್ನೂ ಈ ಧರ್ಮಯುದ್ಧದಲ್ಲಿ ನಾವು ಕಳೆದುಕೊಂಡರು ಹೆದರಬೇಕಿಲ್ಲ. ಪಾದಚಾರಿಗಳಾಗಿ ನಾವು ಊರಿಂದೂರಿಗೆ ಭಿಕ್ಷಾಟನೆ ಮಾಡುತ್ತ ಕಾಶೀಯಾತ್ರೆಗೆ ಹೋಗೋಣ. ಸರ್ಕಾರಕ್ಕೆ ಒಂದು ಕಾಸೂ ಕೊಡಬೇಡ. ತೀರ್ವೆ ಕೊಟ್ಟು ಪಾಪ ಕಟ್ಟಿಕೊಳ್ಳಬೇಡ. ಒಂದು ವೇಳೆ ಸರ್ಕಾರದವರು ಒತ್ತಾಯಮಾಡಿ ವಸೂಲುಮಾಡಲು ಪ್ರಯತ್ನಿಸಿದ್ದಾದರೆ ನಮ್ಮ ಕಾಳು ಕಡ್ಡಿ, ಮನೆ ಮಾರು, ಅವರ ಕೈಗೆ ಸಿಗದಂತೆ ಅವುಗಳನ್ನು ಅಗ್ನಿನಾರಾಯಣನಿಗೆ ಆಹುತಿ ಮಾಡಿಬಿಡು.

ಇದಕ್ಕೆ ವ್ಯಾಖ್ಯಾನ ಬೇಕಿಲ್ಲ. ಕರನಿರಾಕರಣ ಸತ್ಯಾಗ್ರಹಿಗಳ ಸ್ವರೂಪ ನಿದರ್ಶನಕ್ಕೆ ಇದೊಂದು ಉದಾಹರಣೆ.
ಊರು ಬಿಟ್ಟು ಶಿಬಿರ ಸೇರಿದ್ದ ಗಂಡಸರ ಸುಳಿವನ್ನು ಪತ್ತೆ ಹಚ್ಚಲು ಪೊಲೀಸರು ಕೈಕೊಂಡ ನಾನಾ ಬೆದರಿಕೆಯ ಕ್ರಮಗಳಿಗೆ ಸ್ತ್ರೀಯರು ಸಗ್ಗದೆ ಸ್ಥೈರ್ಯದಿಂದ ನಿಂತು ಎದುರಿಸಿದ್ದು ಇತಿಹಾಸದ ಪುಟಗಳಲ್ಲಿ ಸ್ಥಿರವಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ.

ತಮಗಾಗಲೀ ತಮ್ಮ ಹೆಂಡಿರುಮಕ್ಕಳಿಗಾಗಲೀ ಸ್ವಲ್ಪ ಮಾತ್ರ ಅಪಮಾನವಾದರೆ ಸಹಿಸಲಾರದ ನಾಡಜನರು ಈ ಎಲ್ಲ ಕ್ರಮಗಳ ಎದುರಿನಲ್ಲೂ ತಾಳ್ಮೆ ವಹಿಸಿ ಅಹಿಂಸಾವ್ರತವನ್ನು ಪಾಲಿಸಿದರು. ಇದು ಅವರ ಸತ್ತ್ವಪರೀಕ್ಷೆಯ ಪ್ರಸಂಗವಾಗಿ ಪರಿಣಮಿಸಿತು. ಗಾಂಧೀಜಿಯವರಲ್ಲಿ ಅವರ ಅಹಿಂಸಾತತ್ತ್ವದಲ್ಲಿ ಆಗ ನಾಡವರಿಗಿದ್ದ ನಿಷ್ಠೆಯ ಪರಾಕಾಷ್ಠತೆಯಿಂದಾಗಿಯೇ ಅವರು ಇಂಥ ಉದ್ವೇಗ ಜನಕ ಸನ್ನಿವೇಶದಲ್ಲಿ ತಾಳ್ಮೆ ವಹಿಸುವುದು ಸಾಧ್ಯವಾಯಿತೆನ್ನಬಹುದು.                          (ಟಿ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ